ಕೊಹಿಮ

ನಾಗಾಲ್ಯಾಂಡಿನ ಆಡಳಿತಕೇಂದ್ರ. ಕೊಹಿಮ ಜಿಲ್ಲೆಯ ಮುಖ್ಯಪಟ್ಟಣ. ದೀಮಾಪುರ-ಇಂಫಾಲ್ ರಾಷ್ಟ್ರೀಯ ಹೆದ್ದಾರಿಯ ಮೇಲಿದೆ. 10.ಚ.ಕಿಮೀ ವಿಸ್ತೀರ್ಣವಿರುವ ಒಂದು ಜನಸಂಖ್ಯೆ 21,398 (1971). ತಕ್ಕಮಟ್ಟಿಗೆ ಸುಯೋಜಿತವಾದ ಈ ಪಟ್ಟಣದ ನಡುಭಾಗದಲ್ಲಿ ಪೇಟೆಯೂ ಸುತ್ತಣ ಬೆಟ್ಟಗಳ ಮೇಲೆ ಜನವಸತಿಯೂ ಸೈನಿಕ ಬಿಡಾರಗಳೂ ಹಬ್ಬಿವೆ. ಕೊಹಿಮಾಕ್ಕೆ ಅತ್ಯಂತ ಹತ್ತಿರದ ವಿಮಾನ ನಿಲ್ದಾಣ ಇರುವುದು ದೀಮಾಪುರದಲ್ಲಿ, ದೀಮಾಪುರವೇ ಕೊಹಿಮಕ್ಕೆ ಅತ್ಯಂತ ಹತ್ತಿರದ ರೈಲ್ವೆ ನಿಲ್ದಾಣ ಕೂಡ. ಕೊಹಿಮದಿಂದ ಇದು 74 ಕಿಮೀ ದೂರದಲ್ಲಿದೆ.

	ಎರಡನೆಯ ಮಹಾಯುದ್ಧದ ಕಾಲದಲ್ಲಿ 1944ರ ಏಪ್ರಿಲ್ ತಿಂಗಳಲ್ಲಿ ಜಪಾನೀಯರು ಕೊಹಿಮ ನಗರವನ್ನು ಆಕ್ರಮಿಸಲು ಯತ್ನಿಸಿದಾಗ ಇಲ್ಲಿ ಉಗ್ರಕಾಳಗ ನಡೆಯಿತು. ಅದರ ಕುರುಹಾಗಿ ಜಪಾನೀ ಟ್ಯಾಂಕ್ ಒಂದು ಪಟ್ಟಣದ ನಡುವೆ ಮುರಿದುಬಿದ್ದಿದೆ. ಯುದ್ಧದಲ್ಲಿ ಮಡಿದವರ ಸ್ಮಾರಕವೊಂದು ಸ್ಥಾಪಿತವಾಗಿದೆ.

	ಕೊಹಿಮ ಜಿಲ್ಲೆಯ ವಿಸ್ತೀರ್ಣ ಸು.7,200 ಚ.ಕಿಮೀ ಜನಸಂಖ್ಯೆ 1,74,910 (1971).

	ಕೊಹಿಮ ಜಿಲ್ಲೆ ಪರ್ವತಮಯ ಪ್ರದೇಶ. ಇಲ್ಲಿ ದೊಡ್ಡ ನದಿಗಳು ಯಾವುವೂ ಇಲ್ಲ. ಇಲ್ಲಿರುವ ನಾಲ್ಕು ಮುಖ್ಯ ಶಿಖರಗಳು ಇವು; ಜಾಪ್‍ವೊ(9,890), ಕಾಪು(9,320'), ಪವಾನ (9,156') ಮತ್ತು ಕಪಾಮೇಸು (7,970'). ಇಲ್ಲಿಯ ವಾರ್ಷಿಕ ಸರಾಸರಿ ಮಳೆ 2,000 ಮಿಮೀ. ಚಳಿಗಾಲದಲ್ಲಿ ನೀರು ಹೆಪ್ಪುಗಟ್ಟುವಷ್ಟು ಶೀತವಿರುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳು ಬಲು ಚಳಿ. ಬೇಸಗೆಯ ವಾಯುಗುಣ ಹಿತಕರ. ಇದರಿಂದಾಗಿ ಕೊಹಿಮ ನಗರ ಒಂದು ಆರೋಗ್ಯಧಾಮ.

	ಕೊಹಿಮ ಜಿಲ್ಲೆ ಬಹುತೇಕ ಅರಣ್ಯಪ್ರದೇಶ. ಸೇಕಡ 18ರಷ್ಟು ಅರಣ್ಯ ಸರ್ಕಾರದ ಸ್ವಾಮ್ಯದಲ್ಲಿದೆ. ಕೃಷಿ ಇಲ್ಲಿಯ ಪ್ರಧಾನ ಉದ್ಯೋಗ. ಮೈದಾನ ಪ್ರದೇಶಗಳಲ್ಲಿ ಉಪಯೋಗಿಸುವ ಕೃಷಿ ಉಪಕರಣಗಳು ಇಲ್ಲಿ ಬಳಕೆಯಲ್ಲಿಲ್ಲ. ಜನರೇ ನೆಲವನ್ನು ಅಗೆದು ಹದಗೊಳಿಸುತ್ತಾರೆ. ಇಲ್ಲಿಯ ಪುರಾತನ ಕೃಷಿ ಪದ್ಧತಿಗೆ ಝಂ ಎಂದು ಹೆಸರು. ಮರಗಿಡಗಳನ್ನು ಕಡಿದು ಕೃಷಿಗೆ ಯೋಗ್ಯವನ್ನಾಗಿ ಮಾಡಿದ ಮೇಲೆ ಆ ಪ್ರದೇಶದಲ್ಲಿ 6-8 ವರ್ಷಗಳ ಕಾಲ ಬೆಳೆಯನ್ನು ತೆಗೆಯುತ್ತಾರೆ. ಅನಂತರ ಅದನ್ನು ಬಿಟ್ಟು ಮುಂದಿನ ಅರಣ್ಯಪ್ರದೇಶಕ್ಕೆ ಬೆಳೆಯೊಡ್ಡಲು ತೆರಳುತ್ತಾರೆ. ಈಚೆಗೆ ಸುಧಾರಿತ ಕೃಷಿ ಪದ್ಧತಿಗಳು ಜಾರಿಗೆ ಬರುತ್ತಿವೆ. ಇಳಿಜಾರು ನೆಲವನ್ನು ಮೆಟ್ಟಲು ಮೆಟ್ಟಲಾಗಿ ಕಡಿದು ಕೃಷಿ ಮಾಡುವ ವಿಧಾನ ಅನುಸರಿಸಲಾಗುತ್ತಿದೆ. ಬತ್ತ ಮುಖ್ಯ ಬೆಳೆ. ಗೋಧಿ ಮತ್ತು ಕಬ್ಬಿನ ಬೆಳೆಗಳೂ ವ್ಯಾಪಕವಾಗುತ್ತಿವೆ. ಪ್ರತಿ ಸಂಸಾರವೂ ಸಾಧಾರಣವಾಗಿ ತನಗೆ ಬೇಕಾಗುವಷ್ಟು ಬತ್ತವನ್ನು ಬೆಳೆದುಕೊಳ್ಳುತ್ತದೆ.

	ಇಲ್ಲಿ ಕೃಷಿ ಮತ್ತು ಹಾಲಿಗಾಗಿ ದನಕರುಗಳನ್ನು ಸಾಕುವುದು ಬಲು ವಿರಳ. ಅವನ್ನು ಸಾಮಾನ್ಯವಾಗಿ ಮಾಂಸಕ್ಕಾಗಿ ಸಾಕುತ್ತಾರೆ. ಹಂದಿ ಮತ್ತು ಕೋಳಿಸಾಕುವುದು ಜನರ ಉಪಕಸುಬು.

	ದೊಡ್ಡ ಕೈಗಾರಿಕೆ ಯಾವುದೂ ಇಲ್ಲಿ ಸ್ಥಾಪಿತವಾಗಿಲ್ಲ. ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ದೀಮಾಪುರದಲ್ಲಿ ಒಂದು ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಲಿದೆ. ಮನೆಗಳಲ್ಲಿ ನಾಗಾಮಹಿಳೆಯರು ಕುಶಲ ಕೆಲಸಗಳಲ್ಲಿ ತೊಡಗಿರುತ್ತಾರೆ. ಮಹಿಳೆಯರು ಸಣ್ಣ ಮಗ್ಗಗಳಿಂದ ಶಾಲುಗಳನ್ನು ನೇಯುತ್ತಾರೆ.

	ಇಲ್ಲಿಯ ಮಣ್ಣು ಬಹಳ ಮೆತು. ಮಳೆಗಾಲದಲ್ಲಿ ರಸ್ತೆಗಳು ಕುಸಿದು ಸಂಚಾರಕ್ಕೆ ಅಡ್ಡಿಯನ್ನೊಡ್ಡುತ್ತವೆ. ನಾಗಾರಾಜ್ಯ ಸ್ಥಾಪನೆಯಾದ ಮೇಲೆ ಒಳ್ಳೆಯ ರಸ್ತೆಗಳ ನಿರ್ಮಾಣವಾಗಿದೆ ಈಗ ನೂರಕ್ಕಿಂತ ಹೆಚ್ಚು ಬಸ್ಸುಗಳು ಕೊಹಿಮದಿಂದ ರಾಜ್ಯದ ಅನೇಕ ಕಡೆಗಳಿಗೆ ಕ್ರಮವಾಗಿ ಸಂಚರಿಸುತ್ತವೆ.

	ಜಿಲ್ಲೆಯಲ್ಲಿ ನಾಲ್ಕು ಉಪವಿಭಾಗಗಳಿವೆ. ಒಂದೊಂದು ಉಪವಿಭಾಗವನ್ನೂ ಹಲವು ವೃತ್ತಗಳಾಗಿ ವಿಂಗಡಿಸಲಾಗಿದೆ. ಕೊಹಿಮ ಪಟ್ಟಣದ ಆಡಳಿತಕ್ಕಾಗಿ ನಗರ ಸಮಿತಿಯುಂಟು. ಈ ಸಮಿತಿಯಲ್ಲಿ ಎಂಟು ಚುನಾಯಿತ ಸದಸ್ಯರೂ 4 ನಾಮಕರಣ ಸದಸ್ಯರೂ ಇದ್ದಾರೆ. ಜಿಲ್ಲಾಧಿಕಾರಿ ಇದರ ಅಧ್ಯಕ್ಷ. ಚುನಾಯಿತ ಉಪಾಧ್ಯಕ್ಷ ನಗರಸಮಿತಿಯ ದೈನಂದಿನ ಕಾರ್ಯಗಳನ್ನು ನೋಡಿಕೊಳ್ಳುತ್ತಾನೆ. ಸಮಿತಿ ಅಧಿಕಾರಾವಧಿ ಮೂರು ವರ್ಷಗಳು.
(ಎಂ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ